ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಲಂಚದ ಹಣ ಪಡೆಯುತ್ತಿದ್ದ ವೇಳೆ ವಸತಿ ಶಾಲೆ ಪ್ರಾಂಶುಪಾಲರೊಬ್ಬರು ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ತಿಪ್ಲಾಪುರದ ಮೇಘರಾಜ ಎಂಬುವ ವರು ನೀಡಿದ ದೂರಿನ ಮೇರೆಗೆ, ತಾಲ್ಲೂಕಿನ ಹುಣಸೇಕಟ್ಟೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ನಾಮದೇವ ಅವರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ₹10,000 ಲಂಚ ಪಡೆಯುವ ವೇಳೆ ನಾಮದೇವ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ಲೋಕಾಯುಕ್ತ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲಂಚಕ್ಕೆ ಬೇಡಿಕೆ ಇಡಲು ಕಾರಣವೇನು?
ಮೇಘರಾಜ ಅವರ ಮಗಳ 7 ನೇ ತರಗತಿ ಪ್ರವೇಶಾತಿಗಾಗಿ ಪ್ರಾಂಶುಪಾಲ ನಾಮದೇವ್ ₹20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ₹10,000 ರೂಪಾಯಿ ಲಂಚ ನೀಡುವಂತೆ ತಿಳಿಸಿದ್ದರು ಎಂದು ಆರೋಪಿಸಲಾಗಿದೆ.
ಸೋಮವಾರ ಮಧ್ಯಾಹ್ನ ವಸತಿ ಶಾಲೆಯ ಕೊಠಡಿಯಲ್ಲಿ ಲಂಚದ ಹಣ ಪಡೆಯುತ್ತಿದ್ದಾಗ, ಶಿವಮೊಗ್ಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲೋಕಾಯುಕ್ತ ಅಧೀಕ್ಷಕ ಎಂ.ಎಸ್.ಕೌಲಾ ಪೂರೆ ಮಾರ್ಗದರ್ಶ ನದಲ್ಲಿ ದಾಳಿ ನಡೆಸಲಾಗಿದೆ. ಉಪಾಧೀಕ್ಷಕ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ, ಲೋಕಾಯುಕ್ತ ಇನ್ಸ್‌ಪೆಕ್ಟರ್ ರದ್ರೇಶ್.ಕೆ.ಪಿ ಟ್ರ್ಯಾಪ್ ಕಾರ್ಯಚರಣೆ ನಡೆಸಿದರು.
ಇನ್ಸ್‌ಪೆಕ್ಟರ್ ವೀರಬಸಪ್ಪ ಎಸ್.ಕುಸಲಾ ಪುರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.